ಹಿನ್ನೆಲೆ

ದಲಿತ ಸಮುದಾಯಗಳು ಸಾವಿರಾರು ವರ್ಷಗಳಿಂದಲೂ ಜಾತಿ ತಾರತಮ್ಯವನ್ನು ಅನುಭವಿಸುತ್ತಿವೆ. ವಸಾಹತುಶಾಹಿಯಿಂದ ಸ್ವಾತಂತ್ರ್ಯ ಪಡೆದುಕೊಂಡು ಪ್ರಜಾಸತ್ತಾತ್ಮಕವಾದ ಗಣರಾಜ್ಯವಾದ ಮೇಲೂ ತಾರತಮ್ಯ ಕೊನೆಯಾಗಿಲ್ಲ. ಭಾರತೀಯ ಸಂವಿಧಾನದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಮೂಲ ಆದರ್ಶಗಳೊಂದಿಗೆ ದಲಿತ ಸಮುದಾಯಗಳುಆಪ್ತವಾದ ನಂಟು ಹೊಂದಿವೆ. ಕಾರಣ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಘನತೆ ಮತ್ತು ಹಕ್ಕುಗಳಿಂದ ವಂಚಿತವಾಗಿರುವ ಅವರಿಗೆ ಅವು ಭರವಸೆಯ ಆಧಾರವಾಗಿವೆ. ಈ ಆದರ್ಶಗಳಿಗಾಗಿ ದಲಿತರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ, ಕಾನೂನಾತ್ಮಕವಾಗಿ- ಹೀಗೆ ಹಲವು ನೆಲೆಗಳ ಹೋರಾಟಗಳನ್ನು ದೀರ್ಘ ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ. ಶಿಕ್ಷಣ, ಉದ್ಯೋಗ, ಪ್ರಾತಿನಿಧ್ಯ ಎಲ್ಲವೂ ದಕ್ಕಿರುವುದು ಹೋರಾಟದ ಫಲದಿಂದಲೇ. ಭಾರತದ ಸ್ವಚ್ಛತೆಯ ಕೆಲಸದಲ್ಲಿ ತೊಡಗಿರುವವರನ್ನು ಒಟ್ಟಾರೆಯಾಗಿ ಸಫಾಯಿ ಕರ್ಮಚಾರಿಗಳು ಎಂದು ಕರೆಯಲಾಗುತ್ತದೆ.ಕರ್ನಾಟಕದಲ್ಲಿ ಅವರನ್ನು ಪೌರಕಾರ್ಮಿಕರು ಎಂಬ ಹೆಸರಿನಲ್ಲಿ ಗುರುತಿಸಲಾಗಿದೆ. ಪೌರಕಾರ್ಮಿಕರು ದಲಿತರಲ್ಲೇ ಹೆಚ್ಚು ವಂಚಿತರಾಗಿದ್ದಾರೆ. ಹಳ್ಳಿಯಿಂದ ನಗರಗಳವರೆಗೂ ನಿತ್ಯವೂ ತೆರವು ಮಾಡುವ ಟನ್ನುಗಟ್ಟಲೆ ತ್ಯಾಜ್ಯ ಹಾಗೂ ಚರಂಡಿ ಮತ್ತು ಮಲದ ಗುಂಡಿಗಳು ಸಫಾಯಿ ಕರ್ಮಚಾರಿಗಳ ಅಪಾಯಕಾರಿ ಮತ್ತು ಕಠಿಣ ದುಡಿಮೆಗೆ ಸಾಕ್ಷಿಯಾಗಿದೆ. ಎಲ್ಲೆಂದರಲ್ಲಿ ಚೆಲ್ಲಾಡುವ ಕಸ, ಕಟ್ಟಿಕೊಂಡ ಚರಂಡಿ, ಮೋರಿಗಳು ಅತ್ಯಾಧುನಿಕ ಡಿಜಿಟಲ್ ಯುಗದಲ್ಲೂ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯು ಜನರಲ್ಲಿ ಅಂತರ್ಗತಗೊಳಿಸಿರುವ ಅಸೂಕ್ಷö್ಮತೆಗೆ ಕನ್ನಡಿ ಹಿಡಿಯುತ್ತವೆ. ಸಫಾಯಿ ಕರ್ಮಚಾರಿಗಳ ದುಡಿಮೆ ಮತ್ತು ಅವರ ಲೋಕದೃಷ್ಟಿಯನ್ನು ಕಡೆಗಣಿಸಿರುವ ಒಟ್ಟು ಸಮಾಜವು ಒಳಗಿಂದಲೇ ಕೊಳೆತು ಉಸಿರುಗಟ್ಟುತ್ತಿರುವುದರ ಅಪಾಯವನ್ನು ಭೂಮಿಯ ತಾಪಮಾನವೇ ಸೂಚಿಸುತ್ತಿದೆ. ಸ್ವಚ್ಛತೆಯ ದುಡಿಮೆ ಮತ್ತು ಆ ದುಡಿಮೆ ಮಾಡುವವರ ಲೋಕದೃಷ್ಟಿಯೊಂದಿಗೆ ಒಟ್ಟಾರೆ ಸಮಾಜಕ್ಕೆ ಇರುವ ಅಂತರವನ್ನು ಗುರುತಿಸುವ ಹಾಗೂ ಅಂತರವನ್ನು ಮುರಿಯುವ ಪ್ರಯತ್ನಗಳು ನಮಗೆ ಮರುಜೀವ ನೀಡಬಲ್ಲವು. ‘ನೀರದಾರಿ’ ಅಂತರಗಳ ಮುರಿಯುವ ನಿಟ್ಟಿನಲ್ಲಿ ಆಗಬೇಕಾಗಿರುವ ಸಂವಾದದ ಮೊದಲ ಹೆಜ್ಜೆಯಾಗಿದೆ. ಕೂಡಿ ಹಂಚಿಕೊಳ್ಳಬೇಕಾದ ಭವಿಷ್ಯಕ್ಕೆ ಬೆಳಕಾಗುವ ಭರವಸೆಯಲ್ಲಿರಾಜಕೀಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಇತಿಹಾಸವಿರುವ ಕರ್ನಾಟಕದ ಪೌರಕಾರ್ಮಿಕರನ್ನು ಸಮಾನ ಪ್ರಜೆಗಳಾಗಿ ಅರಿಯುವ ಪ್ರಯತ್ನವನ್ನು ನೀರದಾರಿ ತಂಡವು ಮಾಡಿದೆ. ಈ ಪ್ರಯತ್ನ ಒಂದು ಪಯಣದಂತೆ. ಹನಿಗಳು ಹನಿದು ಹನಿದು ತೊರೆಯಾಗಿ ಹೊಳೆಯಾಗಿ ನದಿಯಾಗಿ ಬಯಲು, ಬೆಟ್ಟ, ಕೊರಕಲುಗಳಲ್ಲಿ ಹರಿದು, ಧುಮುಕಿ, ನುಗ್ಗಿ ಕಡಲು ಸೇರುವ ಪಯಣ. ಸಿಕ್ಕ ಕೊಳೆ, ಕಸವನ್ನೆಲ್ಲ ತೆಕ್ಕೆಗೆ ತೆಗೆದುಕೊಂಡು ರಸವಾಗಿಸುತ್ತ ಸಾಗುವ ಪಯಣ. ಕಡಲು ಸೇರಿ ಕುದ್ದು ಆವಿಯಾಗಿ ಸುರಿದು ಮತ್ತೆ ಹರಿಯುವ ಚಕ್ರೀಯ ಪಯಣವಿದು. ಹಾಡು, ಕತೆಗಳು, ಪುರಾಣಗಳು, ವರದಿ, ಸಂಶೋಧನೆ ಇತ್ಯಾದಿಗಳನ್ನು ನೀರದಾರಿ ಒಳಗೊಂಡಿದೆ. ನೀವು ಈ ನೀರದಾರಿಯಲ್ಲಿ ನಡೆದು ಪಯಣ ಮುಂದುವರೆಸಿ, ದಾರಿ ವಿಸ್ತರಿಸಿ, ನೀರೊಳಗಣ ಪ್ರತಿಬಿಂಬದಲ್ಲಿ ನಿಮ್ಮನ್ನು ಕಂಡುಕೊಳ್ಳಿ.

ಕಳಂಕಿತ ಜಾತಿಗಳ ಸಂಪ್ರದಾಯಗಳು

ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಂಚಿಗೆ ದೂಡಲಾದ ಸಮುದಾಯಗಳ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟುವುದು ಕಷ್ಟಕರ. ಕಾರಣ ಅನಕ್ಷರಸ್ಥರಾದ ಈ ಸಮುದಾಯಗಳಿಗೆ ವ್ಯವಸ್ಥಿತವಾಗಿ, ಕಾಲಾನುಕ್ರಮವಾಗಿ, ತಾರ್ಕಿಕವಾಗಿ ದಾಖಲಿಸಲು ಸಾಧ್ಯವಿಲ್ಲ. ಆ ಸಮುದಾಯಗಳನ್ನು ಎಷ್ಟೇ ಅಂಚಿಗೆ ನೂಕಲಾದರೂ ಕೊಡುಕೊಳ್ಳುವಿಕೆಗಳು ಪ್ರಧಾನ ಮತ್ತು ಅಧೀನ ಸಮುದಾಯಗಳ ನಡುವೆ ನಡದೇ ಇರುತ್ತವೆ. ಆದರೆ ಪ್ರಧಾನಧಾರೆಯ ಸಂಸ್ಕೃತಿಯು ಅಧೀನಧಾರೆಯಿಂದ ಪಡೆದುಕೊಂಡದ್ದನ್ನು ಸೇರಿಸಿಕೊಂಡೂ ಮಾನ್ಯಮಾಡಲು ಹಿಂಜರಿದರೆ ಅಧೀನಧಾರೆಗಳು ಪ್ರಧಾನಧಾರೆಯಿಂದ ಪಡೆದುಕೊಂಡದ್ದಕ್ಕೆ ಧನ್ಯರಾಗಿಯೂ ಇರುತ್ತವೆ ಹಾಗೂ ಅವುಗಳ ಅನುಕರಣೆಯ ಮೂಲಕ ಅವು ಶ್ರೇಷ್ಠತೆ ಸಾಧಿಸುತ್ತವೆ ಎಂದು ಭಾವಿಸಲಾಗುತ್ತದೆ. ತಮ್ಮದೆ ಶ್ರೇಷ್ಠ, ಶುದ್ಧವೆಂಬ ಸ್ವಾಮ್ಯತೆಯನ್ನೂ ಸ್ಥಾಪಿಸದ, ದಾಖಲಿಸುವ ಸಿದ್ಧಮಾದರಿಯೂ ಗೊತ್ತಿರದ ಸಮುದಾಯಗಳ ಸಾಂಸ್ಕೃತಿಕ ಪರಂಪರೆಯನ್ನು ಹುಡುಕುವುದು ಕಷ್ಟಕರ. ಅವರ ತತ್ವ, ಅನುಸರಿಸುವ ದೇವರು, ಸಂತರು (ಹೊರಗಿನದನ್ನು ಒಳಗೊಂಡಂತೆ), ನಂಬಿಕೆ, ಆಚರಣೆ, ಮಾತು, ಕತೆ, ಕಲೆ, ಅಭಿವ್ಯಕ್ತಿಯಲ್ಲಿ ಹುಡುಕಾಟ ನಡೆಸಬೇಕಾಗುತ್ತದೆ. ಅಂತಹ ಪ್ರಯತ್ನವನ್ನು ನಮ್ಮ ಮಿತಿಗಳ ನಡುವೆ ನೀರದಾರಿ ಮಾಡಿದೆ. ಭೂಮಿಕೇಂದ್ರಿತ ಆದಿಮೂಲದ ಬೀಜಗಳನ್ನು ಹೊಂದಿರುವ ಆಚರಣೆಗಳು, ದೇವರುಗಳು, ಸಂತರು, ಮಾಂತ್ರಿಕತೆಯನ್ನು ಒಳಗೊಂಡ ಸಮನ್ವಯ ಸಂಸ್ಕೃತಿಯತ್ತ ನೀರದಾರಿ ನೋಡುತ್ತದೆ.